ಕಲಬುರ್ಗಿ ಜೆಲ್ಹೆಯ ಮಳಖೇಡದ ಒಂದು ವಿಶಿಷ್ಟ ಮನೆತನದಲ್ಲಿ ಜನ್ಮತಾಳಿದ ಶ್ರೀ ಜಯತೀರ್ಥರ ಪೂರ್ವಾಶ್ರಮದ ಹೆಸರು ' ರಘುನಾಥ ' ಬಾಲ್ಯದಲ್ಲಿ ಉಪನಯಾದಿ ಸಂಸ್ಕಾರಗಳೊಂದಿಗೆ ಕುದುರೆ ಸವಾರಿ, ಖಡ್ಗವಿದ್ಯೆ , ಧನುರ್ವಿದ್ಯೆ ಮೊದಲಾದ ಕ್ಷತ್ರಿಯೋಚಿತ ಶಿಕ್ಷಣವನ್ನೂ ಇವರು ಹೊಂದಿದ್ದರು.ರೂಪಗುಣೋಚಿತವಾದ ಕನ್ಯೆಯೊಂದಿಗೆ ವಿವಾಹವೂ ಆಗಿತ್ತು.ಒಮ್ಮೆ ಸುಮಾರು ಇಪ್ಪತ್ತನೆಯ ವಯಸ್ಸಿನಲ್ಲಿ ಇವರು ಅಶ್ವಾರೋಹಿಗಳಾಗಿ ವಿಹಾರಕ್ಕಾಗಿ ಭೀಮರಥೀ ನದಿ ( ಕಾಗಿನಿ) ಯ ಬಳಿಗೆ ಹೋದಾಗ ಬಿಸಿಲಿನ ತಾಪದಿಂದ ಬಾಯಾರಿ ಅಶ್ವಾರೋಹಿಗಳಾಗಿಯೇ ನದಿಯ ಪ್ರವಾಹದಲ್ಲಿ ನುಗ್ಗಿ ಗೋವಿನಂತೆ ನೀರಿಗೆ ಬಾಯಿಹಚ್ಚಿ ಕುಡಿಯಲು ತೊಡಗಿದ್ದಾಗ ಅಲ್ಲಿಯೇ ಇದ್ದ ಶ್ರೀ ಅಕ್ಷೋಭ್ಯ ತೀರ್ಥರು ಇದನ್ನು ಕಂಡು ' ಕಿಂ ಪಶುಃ ಪೂರ್ವದೇಹೇ ' ಎಂದು ನುಡಿದಾಗ ತತ್ಕ್ಷಣವೇ ಪೂರ್ವ ಜನ್ಮದ ಸ್ಮೃತಿಯನ್ನು ಪಡೆದು ಶ್ರೀ ಅಕ್ಷೋಭ್ಯತೀರ್ಥರಿಂದ ವಿಧ್ಯುಕ್ತವಾಗಿ ಪರಮಹಂಸಾಶ್ರಮವನ್ನು ಸ್ವೀಕರಿಸಿದ ಇವರು ತಮ್ಮನ್ನು ಮರಳಿ ಸಂಸಾರಕ್ಕೆ ಮರಳಿಸುವ ತಂದೆ ತಾಯಿಗಳ ಪ್ರಯತ್ನವನ್ನು ತಮ್ಮ ಅಪಾರವಾದ ತೇಜಸ್ಸಿನಿಂದ ವಿಫಲಗೊಳಿಸಿದರು .ಗುರುಗಳಿತ್ತ ' ಜಯತೀರ್ಥ 'ಎಂಬ ಆಶ್ರಮನಾಮ ಅವರಿಗೆ ಅತ್ಯಂತ ಅನ್ವರ್ಥವಾಗಿತ್ತು .ಗುರುಗಳಿಂದ ಶಾಸ್ತ್ರಾಧ್ಯಯನ ಮಾಡಿ ಅವರ ಅಪ್ಪಣೆ ಮೇರೆಗೆ ವ್ಯಾಪಕವಾಗಿ ದಿಗ್ವಿಜಯವನ್ನು ಪೂರೈಸಿದರು. ಶ್ರೀ ಅಕ್ಷೋಭ್ಯತೀರ್ಥರ ತರುವಾಯ ಸರ್ವಜ್ಞಪೀಠವನ್ನಲಂಕರಿಸಿ ಇಪ್ಪತ್ಮೂರು ವರ್ಷಗಳ ಕಾಲ ಪಾಠ ಪ್ರವಚನ, ತೀರ್ಥಯಾತ್ರೆ , ವಾದಿಜಯ , ಗ್ರಂಥ ರಚನೆ ಮುಂತಾದ ಮಹತ್ಕಾರ್ಯಗಳನ್ನು ವ್ಯಾಪಕವಾಗಿ ಮಾಡುತ್ತಾ ವಿದ್ಯಾವಿರಾಜತೀರ್ಥತೆಂಬ ತಮ್ಮ ಶಿಷ್ಯರೊಬ್ಬರಿಗೆ ಪೀಠವನ್ನು ಒಪ್ಪಿಸಿ ಕಾಗಿನೀ ತೀರದ ಮಳಖೇಡ ಗ್ರಾಮದಲ್ಲಿ ವಿಭವ ಸಂವತ್ಸರದ ಆಷಾಢ ಕೃಷ್ಣ ಪಂಚಮಿಯಂದು ಬೃಂದಾವನ ಪ್ರವೇಶ ಮಾಡಿದರು.
ಕಾಶಿ, ಪ್ರಯಾಗ, ಕೊಲ್ಲಾಪುರ ,ಶ್ರೀರಂಗ, ಉಡುಪಿ, ವಿಜಯನಗರ, ದೆಹಲಿ, ಅಹಮದಾಬಾದ್,ನಾಸಿಕ, ಪಂಢರಪುರ, ಮೊದಲಾದ ಕ್ಷೇತ್ರಗಳನ್ನು ಶ್ರೀಜಯತೀರ್ಥರು ತಮ್ಮ ದಿಗ್ವಿಜಯ ಕಾಲದಲ್ಲಿ ಸಂದರ್ಶಿಸಿದ್ದರು .ಅಹಮದಾಬಾದ್ ಗೆ ದಿಗ್ವಿಜಯ ಮಾಡಿದ ಪ್ರಸಂಗದಲ್ಲಿ ಅಲ್ಲಿಯ ಕಾಮದೇವನೆಂಬ ಬೌದ್ಧ ವಿಶ್ವವಿದ್ಯಾಲಯದ ಕುಲಪತಿಯನ್ನು ವಾದದಲ್ಲಿ ಸೋಲಿಸಿದಾಗ ಕುಲಪತಿಯು ಇವರನ್ನೇ ಆ ವಿಶ್ವವಿದ್ಯಾಲಯದ ಕುಲಪತಿಗಳಾಗಿರಲು ಪ್ರಾರ್ಥಿಸಿ ಗೌರವಿಸಿದನೆಂದು ಪ್ರಸಿದ್ಧಿಯುಂಟು .ಪೀಠಾರೋಹಣದ ನಂತರ ಬಹುಕಾಲ ಶ್ರೀಮದಾಚಾರ್ಯರ ಗ್ರಂಥಗಳ ಟೀಕಾ ರಚನೆಯ ಕಾರ್ಯದಲ್ಲಿ ತೊಡಗಿಸಿಕೊಂಡ ಇವರು ಆ ಸಮಯದಲ್ಲಿ ಯರಗೊಳವೆಂಬ ಗ್ರಾಮದ ಬಳಿಯ ಗುಹೆಯೊಂದರಲ್ಲಿ ನೆಲೆಸಿದ್ದು ಭೂಮಿಯಮೇಲೆ ತಾವಾಗಿಯೇ ಉದುರಿದ ಒಣ ಎಲೆಗಳು, ಪಂಚಗವ್ಯ ಇಷ್ಟನ್ನು ಮಾತ್ರ ಸ್ವೀಕರಿಸಿ ಕಠೋರ ತಪಸ್ಸಿನಿಂದ.ಶ್ರೀ ಸರಸ್ವತಿದೇವಿಯನ್ನು ಆರಾಧಿಸಿ ಒಂದು ಘಂಟೆ ಅಂದರೆ ಲೇಖನ ಸಾಮಗ್ರಿಯನ್ನು ಮತ್ತು ಒಂದು ಪತ್ರಶೋಧನ ಸಾಮಗ್ರಿಯನ್ನು ಪಡೆದುಕೊಂಡರು. ವರ್ಷಗಟ್ಟಲೆ ನಡೆದ ಗ್ರಂಥರಚನೆಯ ಕಾಲದಲ್ಲಿ ಅವರ ದಿನನಿತ್ಯದ ಆಹಾರ ಶಿಷ್ಯರು ಭಿಕ್ಷೆ ಎತ್ತಿ ತರುತ್ತಿದ್ದ ಜೋಳದ ನುಚ್ಚು ಮಾತ್ರವೇ ಆಗಿತ್ತು. ಶ್ರೀ ಜಯತೀರ್ಥರು ಇಲ್ಲಿ ಗ್ರಂಥ ರಚನೆಯಲ್ಲಿ ತೊಡಗಿದ್ದಾಗ ಒಮ್ಮೆ ವಿದ್ಯಾರಣ್ಯರು ಸಂಚಾರಕ್ರಮೇಣ ಇಲ್ಲಿಗೆ ಬಂದು ಇವರ ಟೀಕಾಗ್ರಂಥಗಳ ಹಿರಿಮೆಗೆ ಮನಸೋತು ಇವರನ್ನು ಆನೆಯಮೇಲೆ ಕೂರಿಸಿ ಮೆರವಣಿಗೆ ಮಾಡಿ ಗೌರವಿಸಿದರೆಂಬ ಅಪೂರ್ವ ವಿಷಯ ಜಯತೀರ್ಥವಿಜಯದಲ್ಲಿ ಉಲ್ಲೇಖಿಸಲ್ಪಟ್ಟಿದೆ
ಶ್ರೀಜಯತೀರ್ಥರ ಗ್ರಂಥಗಳು
ಶ್ರೀ ಟೀಕಾಚಾರ್ಯರು ಶ್ರೀ ಮಧ್ವಾಚಾರ್ಯರ ಹದಿನೆಂಟು ಗ್ರಂಥಗಳಿಗೆ ಟಿಕೆಗಳನ್ನೂ , ಮೂರು ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ .ಅವುಗಳ ವಿವರ ಹೀಗಿದೆ :-
1 ಶ್ರೀಮನ್ಯಾಯಸುಧಾ ( ಅನುವ್ಯಾಖ್ಯಾನ ಟೀಕಾ )
2 ತತ್ತ್ವ ಪ್ರಕಾಶಿಕಾ ( ಬ್ರಹ್ಮ ಸೂತ್ರ ಭಾಷ್ಯ ಟೀಕಾ)
3 ನ್ಯಾಯವಿವರಣ ಟೀಕಾ ( ಮೊದಲ ಎರಡು
ಪಾದಗಳಿಗೆ )
4 ಸಂಬಂಧ ದೀಪಿಕಾ ,( ಋಗ್ಭ್ಹಾಷ್ಯ ಟೀಕಾ)
5 ಪ್ರಮೇಯ ದೀಪಿಕಾ ( ಗೀತಾ ಭಾಷ್ಯ ಟೀಕಾ )
6 ನ್ಯಾಯದೀಪಿಕಾ ( ಗೀತಾ ತಾತ್ಪರ್ಯ ಟೀಕಾ)
7 ಈಶಾವಾಸ್ಯೋಪನಿಷದ್ಭಾಷ್ಯ ಟೀಕಾ
8 ಷಟ್ಪ್ರಶ್ನೋಪನಿಷದ್ಭಾಷ್ಯ ಟೀಕಾ
9 ವಿಷ್ಣುತತ್ತ್ವವಿನಿರ್ಣಯ ಟೀಕಾ
10 ತತ್ತ್ವೋದ್ಯೋತ ಟೀಕಾ
11 ತತ್ತ್ವಸಂಖ್ಯಾನ ಟೀಕಾ
12 ತತ್ತ್ವವಿವೇಕ ಟೀಕಾ
13 ಪ್ರಮಾಣಲಕ್ಷಣ ಟೀಕಾ
14 ಕಥಾಲಕ್ಷಣ ಟೀಕಾ
15 ಉಪಾಧಿಖಂಡನ ಟೀಕಾ
16 ಪ್ರಪಂಚಮಿಥ್ಯಾತ್ವಾನುಮಾನಖಂಡನ ಟೀಕಾ
17 ಮಾಯಾವಾದ ಖಂಡನ ಟೀಕಾ
18. ಕರ್ಮನಿರ್ಣಯ ಟೀಕಾ
ಸ್ವತಂತ್ರ ಕೃತಿಗಳು
1 ಪ್ರಮಾಣ ಪದ್ಧತಿ 2 ವಾದಾವಳಿ 3 ಪದ್ಯಮಾಲಾ